ಕೇಟರ್, ಹೆನ್ರಿ
1777-1835. ಬ್ರಿಟಿಷ್ ಭೌತವಿಜ್ಞಾನಿ. ಈತನ ಬಾಲ್ಯದ ದಿನಗಳಲ್ಲಿ ಹೇಳಿಕೊಳ್ಳುವಂಥ ಮುಖ್ಯ ಘಟನೆಗಳೇನೂ ನಡೆಯಲಿಲ್ಲ. ಹದಿನೆಂಟನೆಯ ವಯಸ್ಸಿನಲ್ಲಿ ಬ್ರಿಟಿಷ್ ಸೇನೆಯನ್ನು ಸೇರಿದ. ಮುಂದೆ ವರ್ಗವಾಗಿ ಭಾರತಕ್ಕೆ ಬಂದ (1799). ಭಾರತದಲ್ಲಿದ್ದಾಗ ಈ ದೇಶದ ಭೂಮಿತಿಯ ಅಳತೆಯ ಕಾರ್ಯದಲ್ಲಿ ವಿಶೇಷ ಆಸಕ್ತಿ ವಹಿಸಿ ಭೂಮಿಯ ಗುರುತ್ವಾಕರ್ಷಣೆಯ ವ್ಯತ್ಯಾಸಗಳನ್ನು ಕುರಿತು ತಾತ್ತ್ವಿಕ ಅಧ್ಯಯನ ನಡೆಸಿದ. ಅಷ್ಟರ ತನಕ gಯ ನಿರ್ಣಯಕ್ಕಾಗಿ ಉಪಯೋಗಿಸುತ್ತಿದ್ದ ಸಂಯುಕ್ತ ಲೋಲಕಗಳಲ್ಲಿನ ಕೊರತೆಗಳನ್ನು ನಿವಾರಿಸಿ ಪರಸ್ಪರ ಪರಿವರ್ತನೀಯ ಸ್ಥಿತಿಗಳಲ್ಲಿ ಅಲಗುಗಳನ್ನಿರಿಸಿ ತೂಗು ಹಾಕಿದ ಲೋಲಕವನ್ನು ರಚಿಸಿಕೊಂಡ. ಇದಕ್ಕೆ ಕೇಟರ್‍ನ ಲೋಲಕವೆಂದು ಹೆಸರು. ಲಂಡನ್ನಿಗೆ ಹೋದ ಮೇಲೆ gಯ ನಿಖರ ಬೆಲೆಯನ್ನು ಕಂಡುಹಿಡಿದ. ಇಂಥ ನಿರ್ಣಯಗಳ ಬಗ್ಗೆ ಇಂದಿಗೂ ಕೇಟರನ ಲೋಲಕ ಮತ್ತು ವಿಧಾನಗಳು ಶಿಷ್ಟವೆನಿಸಿವೆ. ಉದ್ದಳತೆಗಳ ಶಿಷ್ಟೀಕರಣ, ಸೆಕೆಂಡು ಲೋಲಕಗಳ ಉದ್ದದ ನಿರ್ಣಯ ಮೊದಲಾದ ಹಲವು ವಿಚಾರಗಳು ಇಂದು ಸುಲಭವೆಂದು ಕಂಡುಬಂದರೂ ಅಂದು ಅವು ಬಲು ಕ್ಲಿಷ್ಟವೆನಿಸಿದ್ದುವು. ಅವನ್ನು ಕುರಿತು ಕೇಟರ್ ವಿಶೇಷ ಅಧ್ಯಯನ ನಡೆಸಿದ. ಬ್ರಿಟನ್ನಿನ ಎಪ್.ಆರ್.ಎಸ್. ಪದವಿ ಮತ್ತು ರಷ್ಯ ದೇಶದಿಂದ ಗೌರವ ಕೇಟರನಿಗೆ ಲಭಿಸಿದುವು. ದೂರದರ್ಶಕಗಳಿಗೆ ಜೋಡಿಸುವ ತೇಲುವ ಸಮಾಂತರಕಾರಕವನ್ನು (ಕಾಲಿಮೇಟರ್) ಮೊತ್ತ ಮೊದಲು ಆವಿಷ್ಕರಿಸಿದವ ಈತನೇ ಎಂಬುದನ್ನು ಇಲ್ಲಿ ಸ್ಮರಿಸಬಹುದು. 		              
     (ಯು.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ